Friday, 14 November 2014

ಕಿಬೂತ್ ಎನ್ನುವ ಮಹಾಮನೆಗಳು

ಭಾರತೀಯ ಜೀವನಶೈಲಿಯ ಅಗ್ಗಳಿಕೆಗಳ ಬಗ್ಗೆ ಮಾತನಾಡುವವರು ಅವಿಭಕ್ತ ಕುಟುಂಬಗಳನ್ನು ಭಾವುಕತೆಯಿಂದ ಬಣ್ಣಿಸುವುದಿದೆ. ಆದರೆ, ನಗರೀಕರಣದ ಭರಾಟೆಯಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆ ನಮ್ಮಲ್ಲಿ ಸವಕಲಾಗುತ್ತಿದ್ದರೆ, ಇಸ್ರೇಲ್‌ನಲ್ಲಿನ ‘ಕಿಬೂತ್‌’ಗಳೆನ್ನುವ ‘ಮಹಾಮನೆ’ಗಳು ಆಧುನಿಕ ಕಾಲಘಟ್ಟದ ವಿಸ್ಮಯದಂತೆ ಕಾಣಿಸುತ್ತವೆ. ನೂರಾರು ಕುಟುಂಬಗಳು ಒಟ್ಟಿಗೆ ದುಡಿಯುವ ಹಾಗೂ ಗಳಿಕೆಯನ್ನು ಸಮಾನವಾಗಿ ಹಂಚಿಕೊಳ್ಳುವ ಈ ಕಿಬೂತ್‌ಗಳ ಪರಿಕಲ್ಪನೆಯಲ್ಲಿ ಎದ್ದುಕಾಣಿಸುವುದು ಅಪ್ಪಟ ಮನುಷ್ಯ ಪ್ರೀತಿ.
ಬೆಟ್ಟದ ತುದಿಯಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಆ ಮರ, ಸಮಷ್ಟಿ ಹಿತದ ಕಥೆ ಹೇಳುತ್ತಿತ್ತು. ಜಗತ್ತು ಒಂದು ಕುಟುಂಬ ಎಂಬ ಮಾತು ಪದೇ ಪದೇ ಕೇಳುತ್ತೇವಾದರೂ, ಅದರ ಸ್ವರೂಪ ಇಲ್ಲಿ ಮೈದಳೆದಿತ್ತು. ಆ ಮರದಡಿ ಹುಲ್ಲುಗಾವಲಿನಲ್ಲಿ ಕುಳಿತಿದ್ದ ನಮ್ಮೆದುರು ಅಚ್ಚರಿಯ ಲೋಕವೊಂದು ತೆರೆದಿತ್ತು. ಬರಿಗೈಯಲ್ಲಿ ಮರಳುಗಾಡಿಗೆ ಬಂದ ಕೆಲವೇ ಜನರು, ಸಮಾನತೆ ತತ್ವ ಆಧರಿಸಿ ಸಮುದಾಯವೊಂದನ್ನು ಕಟ್ಟಿ ಬೆಳೆಸಿದ ಅಪೂರ್ವ ಕಥನವದು. ನಾನು, ನನ್ನದು ಎಂಬ ಭಾವ ತುಂಬಿರುವ ಜಗತ್ತಿನಲ್ಲಿ ಸಮಾನತೆ ಪರಿಕಲ್ಪನೆ ಸಾಧಿಸಿದ ಇಸ್ರೇಲಿನ ‘ಕಿಬೂತ್’ ಮಾದರಿ ಸೋಜಿಗಗೊಳಿಸುವಂಥದು.
‘ನಾವೀಗ ಜಗತ್ತಿನ ಅತಿ ದೊಡ್ಡ ಕಿಬೂತ್‌ನೊಳಗೆ ಬಂದಿದ್ದೇವೆ’ ಎಂದು ಜತೆಗಿದ್ದ ಅಮ್ನಾನ್ ಹೇಳಿದಾಗ, ಅಕ್ಕಪಕ್ಕ ಕಂಡಿದ್ದು ಒಂದೇ ಅಳತೆ, ಆಕಾರದ ಹತ್ತಾರು ಮನೆಗಳು. ಸ್ವಲ್ಪ ದೂರ ಸಾಗಿ ವಾಹನ ನಿಂತಾಗ ನಗುಮುಖದಿಂದ ಸ್ವಾಗತಿಸಿದ ವ್ಯಕ್ತಿಯೊಬ್ಬ, ‘ನಾನು ರಾಮ್‘ ಎಂದ. ಅರೆ! ಇಸ್ರೇಲ್‌ನಲ್ಲೂ ರಾಮ ರಾಮ! ಆತ ಕೃಷಿ ಸಮಿತಿ ಮುಖ್ಯಸ್ಥ. ನಾವಿದ್ದುದು ‘ನಾನ್‌ದನ್ ಕಿಬೂತ್’.
ಒಗ್ಗಟ್ಟಾಗಿ ದುಡಿಯುವ ಹಾಗೂ ಪಡೆದಿದ್ದನ್ನು ಸಮಾನವಾಗಿ ಹಂಚಿಕೊಳ್ಳುವ ಉದ್ದೇಶದೊಂದಿಗೆ ರೂಪುಗೊಂಡ ಕಿಬೂತ್ ವಿಧಾನಕ್ಕೆ ಈಗ ನೂರು ವರ್ಷಗಳ ಇತಿಹಾಸ. ಇಸ್ರೇಲಿನಲ್ಲಿ 273 ಕಿಬೂತ್‌ಗಳಿವೆ. ಎಲ್ಲದರ ನಿಯಮಾವಳಿ ಒಂದೇ. ಕಾಲಕ್ಕೆ ತಕ್ಕಂತೆ ತಮ್ಮ ಆಶೋತ್ತರಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೂ ಕಿಬೂತ್‌ಗಳ ಮೂಲ ಉದ್ದೇಶದಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲ.
ಕಿಬೂತ್‌ ಪದ್ಧತಿ ಆರಂಭದ ದಿನಗಳನ್ನು ಕಿನರ್‌ನೆಟ್‌ ಎಂಬಾಕೆ ಹೀಗೆ ದಾಖಲಿಸಿದ್ದಾಳೆ:
‘ಓಹ್! ಆ ದಿನಗಳು ಅದೆಷ್ಟು ಸುಂದರವಾಗಿದ್ದವು! ಹಗಲೆಲ್ಲ ಮೈಮುರಿದು ದುಡಿಯುತ್ತಿದ್ದೆವು. ರಾತ್ರಿ ಮರಳುಗಾಡಿನಲ್ಲಿ ಬೆಂಕಿ ಹೊತ್ತಿಸಿ ಅದರ ಸುತ್ತ ಕುಳಿತು ಬೆಳಕಿನಲ್ಲಿ ಹಾಡು ಹಾಡುತ್ತ ಮಾತಾಡುತ್ತಿದ್ದೆವು. ನಾಳೆ ಮಾಡಬೇಕಾದ ಕೆಲಸದ ಬಗ್ಗೆ ಒಮ್ಮತದಿಂದ ನಿರ್ಧರಿಸಿದ ಬಳಿಕ ಮೌನ ಅಲ್ಲಿ ನೆಲೆಯೂರುತ್ತಿತ್ತು. ಆಗಾಗ್ಗೆ ಕಟ್ಟಿಗೆಯಿಂದ ಸಿಡಿಯುತ್ತಿದ್ದ ಕಿಡಿಯು ಸಣ್ಣದಾಗಿದ್ದರೂ ದೇದೀಪ್ಯಮಾನ ಬೆಳಕನ್ನು ಸೂಸಿದಂತೆ ಭಾಸವಾಗುತ್ತಿತ್ತು. ನಮ್ಮ ಮನದ ಸಣ್ಣ ಬಯಕೆಯು ಮುಂದೆ ಬೃಹತ್‌ ಸ್ವರೂಪ ಪಡೆಯಲಿದೆ ಎಂಬುದರ ಸಂಕೇತದಂತೆ ಆ ಕಿಡಿ ಗೋಚರಿಸುತ್ತಿತ್ತು’.
ಅದೊಂದು ಕನಸು ಯಹೂದಿಗಳು ಹಲವು ಕಾರಣಗಳಿಂದ ಜಗತ್ತಿನ ತುಂಬೆಲ್ಲ ಚದುರಿ ಹೋಗಿದ್ದರು. ಯಹೂದಿ ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ತಾಯ್ನಾಡು ಇಸ್ರೇಲ್‌ಗೆ ವಾಪಸಾದ ಹನ್ನೆರಡು ಯುವಕರ ಮುಂದಿದ್ದುದು ಸಮಾನತೆ ಮೂಲಧ್ಯೇಯವುಳ್ಳ ಸಮುದಾಯ ಕಟ್ಟುವ ಕನಸು (ಆಗಿನ್ನೂ ಇಸ್ರೇಲ್ ದೇಶ ಅಸ್ತಿತ್ವಕ್ಕೆ ಬಂದಿರಲಿಲ್ಲ). ಈ ನೆಲದಲ್ಲಿ ಬೇರೂರುವ ಅವರ ಬಯಕೆ ಕಿಬೂತ್‌ನೊಂದಿಗೆ ಸ್ಪಷ್ಟ ರೂಪು ತಳೆಯಿತು. ‘ಸಮಾನ ದುಡಿಮೆ; ಬರುವ ಆದಾಯದಲ್ಲಿ ಸಮಾನ ಪಾಲು’ ಎಂಬ ಉದ್ದೆೇಶದೊಂದಿಗೆ ಇಸ್ರೇಲ್‌ನ ಉತ್ತರ ಭಾಗದಲ್ಲಿನ ಸೀ ಆಫ್ ಗೆಲಿಲಿ ಸರೋವರದ ಸಮೀಪ ಮೊದಲ ಕಿಬೂತ್ ‘ಡೆಗೇನಿಯ’ 1909ರಲ್ಲಿ ಸ್ಥಾಪನೆಯಾಯಿತು.
ಮರಳುಗಾಡಿನ ಮಧ್ಯೆ ಕಷ್ಟಪಟ್ಟು ದುಡಿಯುತ್ತ, ಬಂದಿದ್ದನ್ನು ಹಂಚಿಕೊಂಡು ಸಹಜೀವನ ಆರಂಭಿಸಿದ ಕಿಬೂತ್‌ಗಳು ಜನಪ್ರಿಯವಾದವು. ಇಸ್ರೇಲ್ ಸ್ಥಾಪನೆಯಾಗುವ ಹೊತ್ತಿಗೆ (1948) ಹಲವು ಕಿಬೂತ್‌ಗಳು ಗಡಿಯುದ್ದಕ್ಕೂ ಸ್ಥಾಪನೆಯಾದವು. ಕಿಬೂತ್‌ ಎಂದರೆ ಹಿಬ್ರೂ ಭಾಷೆಯಲ್ಲಿ ‘ಸಮುದಾಯ’ ಅಥವಾ ‘ಒಂದುಗೂಡುವುದು’ ಎಂದರ್ಥ. ಆರಂಭಿಕ ಹಂತದಲ್ಲಿ ಕಿಬೂತ್‌ಗಳ ಪ್ರಮುಖ ಜೀವನಾಧಾರ ಉದ್ಯೋಗ ಕೃಷಿಯಾಗಿತ್ತು. ಬಳಿಕ ಆಧುನಿಕತೆಗೆ ಒಗ್ಗಿಕೊಂಡ ಕಿಬೂತಿಯನ್ನರು, ಉದ್ಯಮಶೀಲತೆಯನ್ನು ಮೈಗೂಡಿಸಿಕೊಂಡರು. ಈಗಂತೂ ವ್ಯವಸಾಯದ ಜತೆಗೆ ಎಲೆಕ್ಟ್ರಾನಿಕ್ಸ್, ಕೈಗಾರಿಕೆ, ಪ್ಲಾಸ್ಟಿಕ್ ಪದಾರ್ಥ, ಆಧುನಿಕ ಯಂತ್ರ ತಯಾರಿಕೆ, ಪ್ರವಾಸೋದ್ಯಮ ನಿರ್ವಹಣೆ... ಹೀಗೆ ಅವರು ಪಾಲ್ಗೊಳ್ಳದ ಉದ್ಯಮವೇ ಇಲ್ಲ ಎನ್ನುವಂತಾಗಿದೆ. ಅಂದರೆ, ಕಿಬೂತ್ ಇಲ್ಲದ ಇಸ್ರೇಲ್ ಊಹಿಸಿಕೊಳ್ಳಲೂ ಅಸಾಧ್ಯ.
ಕಿಬೂತ್ ಕಾರ್ಯವಿಧಾನ ಹಲವು ಅಚ್ಚರಿಗಳ ಕಂತೆ. ಅಲ್ಲಿನ ಬದುಕು, ಉದ್ಯೋಗ, ವಸತಿ, ಊಟೋಪಚಾರ, ಮಕ್ಕಳ ಪಾಲನೆ, ವೃದ್ಧರ ಯೋಗಕ್ಷೇಮ, ಆದಾಯ, ಲಾಭಾಂಶ ಹಂಚಿಕೆ ಒಂದೊಂದೂ ವಿಶಿಷ್ಟ. ಕಿಬೂತ್ ಜೀವನ ಶೈಲಿ ನೋಡಿದಾಗ ಒಗ್ಗಟ್ಟಾಗಿ ಹೀಗೂ ಇರಬಹುದೇ ಎಂಬ ಸೋಜಿಗ ಮೂಡುತ್ತದೆ.
 

ಮುದ್ದುಮಕ್ಕಳು ‘ಇನ್ನು ಹತ್ತು ನಿಮಿಷ ಕಾಯಬಹುದಲ್ವಾ? ಮಕ್ಕಳು ಊಟ ಮಾಡಿದ ಮೇಲೆ ನಾವು ಕ್ಯಾಂಟೀನ್‌ಗೆ ಹೋಗೋಣ’ ಎಂದು ರಾಮ್ ಹೇಳಿದರು. ಕಾಯುತ್ತ ನಿಂತಿದ್ದಾಗ ತಂಗಾಳಿ ಸುಳಿದು, ಇದು ಮರುಭೂಮಿ ಮಧ್ಯೆಯೇ ಸೃಷ್ಟಿಯಾದ ನಂದನವನ ಎಂಬುದನ್ನು ನೆನಪಿಸಿತು. ಅಷ್ಟರಲ್ಲಿ ಮಕ್ಕಳ ಗುಂಪೊಂದು ನಗುತ್ತ, ಕೇಕೆ ಹಾಕುತ್ತ ಕ್ಯಾಂಟೀನ್‌ನಿಂದ ಹೊರಬಂತು. ಒಂದಲ್ಲ ಎರಡಲ್ಲ, ನೂರೈವತ್ತು ಮಕ್ಕಳು! ಈ ಮಕ್ಕಳು ಬೆಳೆಯುವುದು ಪ್ರತ್ಯೇಕವಾಗಿ; ಅಂದರೆ ಪಾಲಕರಿಂದ ಬೇರೆಯಾಗಿ!
ಮಗುವಿಗೆ ಒಂದೂವರೆ ವರ್ಷ ಆಗುತ್ತಲೇ ಅದನ್ನು ಕಿಬೂತ್‌ನ ಮಕ್ಕಳ ಪಾಲನಾಕೇಂದ್ರಕ್ಕೆ ಸೇರಿಸಲಾಗುತ್ತದೆ. ಅಪ್ಪ–ಅಮ್ಮ ಬೇಕೆಂದಾಗ ನೋಡಿಕೊಂಡು ಬರಬಹುದು. ಇತರ ಮಕ್ಕಳೊಂದಿಗೆ ಬೆಳೆಯುವ ಆ ಮಗುವಿಗೆ ಎಲ್ಲ ಬಗೆಯ ಸೌಲಭ್ಯ ಉಚಿತ. ಅದನ್ನು ಕಿಬೂತ್ ಒದಗಿಸಿಕೊಡುತ್ತದೆ. ‘ಮಕ್ಕಳನ್ನು ಪಾಲಿಸಲು ಹಲವರನ್ನು ನೇಮಿಸಲಾಗುತ್ತದೆ. ಅಲ್ಲಿ ಮಗುವಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಕಲಿಸಿಕೊಡುವುದು ಸಮಾನತೆ, ದೇಶಪ್ರೇಮವನ್ನು’ ಎನ್ನುತ್ತಾರೆ ಕೇಂದ್ರದ ಪಾಲಕ ಮೊಕ್ದಮ್. ನಾನ್‌ದನ್‌ ಕಿಬೂತ್‌ನಲ್ಲಿ ನಾಲ್ಕುನೂರು ಮಕ್ಕಳು ಇದ್ದಾರೆ.
ಬಣ್ಣಬಣ್ಣದ ಉಡುಪು ಧರಿಸಿದ್ದ ಮುದ್ದಾದ ಮಕ್ಕಳಿಗೆ ಟಾಟಾ ಹೇಳಿ ಕ್ಯಾಂಟೀನ್ ಒಳಹೊಕ್ಕಾಗ... ಓಹ್! ಅದೊಂದು ದೊಡ್ಡ ಹೋಟೆಲ್! ಎಂಥ ಭೋಜನವದು! ಐವತ್ತಕ್ಕೂ ಹೆಚ್ಚು ಭಕ್ಯ್ಷಭೋಜ್ಯಗಳು, ಚಾಕಲೇಟ್, ಐಸ್‌ಕ್ರೀಮ್, ಸೂಪ್... ‘ಇದರಲ್ಲಿ ಈಜುವ, ಓಡುವ, ಹಾರಾಡುವ ಜೀವಿಗಳಿಂದ ಮಾಡಿದ ತಿನಿಸು ಯಾವುದು?’ ಎಂದು ಪಕ್ಕಾ ವೆಜಿಟೇರಿಯನ್ ಮಿತ್ರ ತಿವಾರಿ ಚಿಂತೆಗೀಡಾದ. ಕೊನೆಗೆ ಆತನ ಹಸಿವು ತಣಿಸಿದ್ದು ಹಸಿ ತರಕಾರಿ–ಸೊಪ್ಪು, ಯಥೇಚ್ಚ ಹಣ್ಣುಗಳು!   
ದಿನಕ್ಕೆ ಒಂದು ಉಪಾಹಾರ, ಎರಡು ಊಟ, ಬಯಸಿದಾಗಲೆಲ್ಲ ಚಹ-ಕಾಫಿ. ಕಿಬೂತ್‌ನ ಸಾವಿರ ಜನರಿಗೆ ಇದಿಷ್ಟನ್ನು ವರ್ಷದ ಎಲ್ಲ ದಿನಗಳಲ್ಲೂ ಕೊಡುವ ಕ್ಯಾಂಟೀನ್ ನಿರ್ವಹಣೆ ನೋಡಿಯೇ ತಿಳಿಯಬೇಕು. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ಇರುತ್ತದೆ. ಕಿಬೂತ್‌ನಲ್ಲಿ ವಾಸಿಸುವ ಎಲ್ಲರೂ (ನಾಲ್ಕೈದು ಕುಟುಂಬಗಳನ್ನು ಹೊರತುಪಡಿಸಿ) ಮನೆಯಲ್ಲಿ ಅಡುಗೆ ಮಾಡುವ ಗೋಜಿಗೆ ಹೋಗುವುದಿಲ್ಲ. ಸಮಯಕ್ಕೆ ಸರಿಯಾಗಿ ಕ್ಯಾಂಟೀನ್‌ಗೆ ಹಾಜರಾಗುತ್ತಾರೆ. ಊಟ ಮಾಡಿ ಹೋಗುತ್ತಾರೆ. ಪದಾರ್ಥ ಖರೀದಿ, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ಎಲ್ಲವನ್ನೂ ಸಮಿತಿಯೊಂದು ನಿರ್ವಹಿಸುತ್ತದೆ.
ಅಲ್ಲಿರುವ ತಿಂಡಿ-ತಿನಿಸುಗಳದೂ ಒಂದು ಲೋಕ. ‘ನೋಡಿ... ಊಟದ ವಿಷಯದಲ್ಲಿ ನಮ್ಮದು ಶಿಸ್ತು! ಮಧ್ಯಾಹ್ನ ಮಾಡುವ ಅಡುಗೆ ಬೇರೆ; ರಾತ್ರಿ ಊಟಕ್ಕೆ ಮಾಡುವುದೇ ಬೇರೆ. ಎಲ್ಲರೂ ಒಮ್ಮೆಲೇ ಕ್ಯಾಂಟೀನ್‌ಗೆ ಬರುವ ಹಾಗಿಲ್ಲ. ಅದಕ್ಕಾಗಿ ಮಧ್ಯಾಹ್ನ ಹಾಗೂ ರಾತ್ರಿ ತಲಾ ಮೂರು ಸಮಯ ನಿಗದಿ ಮಾಡಿದ್ದೇವೆ. ಊಟದ ಜತೆಗೆ ಬಗೆಬಗೆಯ ಕೇಕ್, ಸೂಪ್, ಸಲಾಡ್, ಹಣ್ಣಿನ ರಸ ಇದ್ದೇ ಇರುತ್ತದೆ’ ಎಂದು ಕ್ಯಾಂಟೀನ್ ಸಮಿತಿ ಸದಸ್ಯ ಉಶೇವ್ ಹೇಳಿದರು. ದಿನಕ್ಕೆ ಎಷ್ಟು ಬಗೆ ತಿಂಡಿ–ತಿನಿಸು ತಯಾರಿಸುತ್ತೀರಿ ಎಂದು ಪ್ರಶ್ನಿಸಿದಾಗ, ‘ಕನಿಷ್ಠ ಮೂವತ್ತು ಬಗೆ’ ಎಂದು ಉತ್ತರಿಸಿದರು!
ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಲೇ ಉದ್ಯೋಗ ಹಿಡಿಯುತ್ತಾರೆ. ಕೆಲವರು ಕಿಬೂತ್‌ನಿಂದ ಹೊರಗೆ ಹೋದರೆ, ಇನ್ನಷ್ಟು ಪದವೀಧರರು ಕಿಬೂತ್ ನಿರ್ವಹಿಸುವ ಉದ್ಯಮಗಳಿಗೆ ಸೇರುತ್ತಾರೆ. ಆ ಉದ್ಯಮಗಳೋ ಗುಂಡುಸೂಜಿ ತಯರಿಕೆಯಿಂದ ಹಿಡಿದು ಬೃಹತ್ ಯಂತ್ರ ತಯಾರಿಕೆವರೆಗೂ ವ್ಯಾಪಿಸಿವೆ. ಇಸ್ರೇಲ್‌ನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಡೇರಿ ಕೂಡ ಉದ್ಯಮ ಸ್ವರೂಪದ ಪಡೆದಿರುವುದರಿಂದ ಆಸಕ್ತ ಯುವಕರು ಅದಕ್ಕೂ ಸೇರುತ್ತಾರೆ.
ಕಿಬೂತ್‌ ಸುತ್ತಮುತ್ತ...
* ‘ಇಸ್ರೇಲ್‌ ಪಿತಾಮಹ’ ಎಂದೇ ಹೆಸರಾದ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್, ರಾಜೀನಾಮೆ ನೀಡಿದ ಬಳಿಕ– ನೆಗೆವ್ ಮರುಭೂಮಿಯಲ್ಲಿನ ಎಸ್‌ಡೆ ಬೊಕೆರ್‌ ಕಿಬೂತ್‌ಗೆ ಸೇರಿಕೊಂಡರು. ಅಲ್ಲಿ ಅವರು ನಿರ್ವಹಿಸುತ್ತಿದ್ದುದು ಬಟ್ಟೆ ತೊಳೆಯುವ ಕೆಲಸವನ್ನು!
* ಕಿಬೂತ್‌ನಲ್ಲೇ ಜನಿಸಿದ ಯಹೂದ್‌ ಬರಾಕ್‌ ೧೯೯೯ರಿಂದ ೨೦೦೧ರವರೆಗೆ ಇಸ್ರೇಲ್‌ ಪ್ರಧಾನಿಯಾಗಿದ್ದರು. ಇಸ್ರೇಲ್‌ನ ಪ್ರಮುಖ ಸಚಿವರು, ಅಧಿಕಾರಿಗಳು ಕಿಬೂತ್‌ಗೆ ಸೇರಿದವರಾಗಿದ್ದಾರೆ.
* ಇಸ್ರೇಲ್‌ನ ಒಟ್ಟು ಕೈಗಾರಿಕೆ ಉತ್ಪನ್ನಗಳ ಪೈಕಿ ಕಿಬೂತ್‌ ಪ್ರಮಾಣ ಶೇ ೯. ಕೃಷಿ ಉತ್ಪನ್ನಗಳ ಪ್ರಮಾಣ ಶೇ ೪೦. ಸುಮಾರು ಇನ್ನೂರು ಜನರು ಇರುವ ‘ಸಸಾ’ ಎಂಬ ಕಿಬೂತ್‌, ವಾರ್ಷಿಕ ೫,೦೦೦ ಕೋಟಿ ರೂಪಾಯಿ (೮೨೦ ದಶಲಕ್ಷ ಡಾಲರ್) ಮೊತ್ತದ ಮಿಲಿಟರಿ ಉಪಕರಣಗಳನ್ನು ತಯಾರಿಸುತ್ತಿದೆ.
* ಜಗತ್ತಿನ ನೂರಾರು ದೇಶಗಳಿಗೆ ಹನಿ ನೀರಾವರಿ ಉಪಕರಣ ಪೂರೈಸುವ ಅತಿದೊಡ್ಡ ಕಂಪೆನಿ ‘ನೆಟಾಫೆಮ್’ ಸಂಸ್ಥಾಪಕರು ಕಿಬೂತಿಯನ್ನರು.
* ಬರೀ ಯೆಹೂದಿಗಳನ್ನೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂಬ ನಿಯಮ ಪಾಲಿಸುತ್ತಿದ್ದ ಕಿಬೂತ್‌ಗಳು, ಕಾರ್ಮಿಕರ ಕೊರತೆಯಿಂದಾಗಿ ಆ ನಿಯಮವನ್ನು ಸರಳಗೊಳಿಸಿದ್ದಾರೆ. ಬೇರೆ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಂಡು, ಅವರಿಗೆ ಕೈತುಂಬ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ.
ಆಯವ್ಯಯ– ಪಕ್ಕಾ ಲೆಕ್ಕ ಹೊರನೋಟಕ್ಕೆ ಅಗಾಧವಾಗಿ ಕಾಣಿಸುವ ಕಿಬೂತ್ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳಲು ಮುಖ್ಯ ಸಮಿತಿ ಆಯ್ಕೆ ಮಾಡಲಾಗಿರುತ್ತದೆ. ಅದು ವರ್ಷದ ಕೊನೆಗೆ ಲೆಕ್ಕಾಚಾರ ಹಾಕುತ್ತದೆ. ಎಲ್ಲ ಉದ್ಯಮಗಳಿಂದ ಪಡೆದಿರುವ ಆದಾಯ ಒಂದು ಕಡೆ; ಕಿಬೂತ್ ನಿರ್ವಹಿಸಲು ತಗುಲಿದ ಒಟ್ಟಾರೆ ವೆಚ್ಚ ಇನ್ನೊಂದು ಕಡೆ. ಎಲ್ಲ ಆಯವ್ಯಯ ಲೆಕ್ಕ ಮಾಡಿ, ಕಿಬೂತ್‌ಗೆ ಸಿಕ್ಕ ಲಾಭ ಎಷ್ಟು ಎಂಬುದನ್ನು ಕಂಡುಕೊಳ್ಳುತ್ತದೆ. ಒಂದಷ್ಟನ್ನು ‘ಆಪದ್ಧನ’ ಎಂದು ತೆಗೆದಿಟ್ಟು, ಉಳಿದಿದ್ದನ್ನು ತನ್ನ ಸದಸ್ಯರಿಗೆ ಸರಿಸಮವಾಗಿ ಹಂಚಿಬಿಡುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಕೆಲಸಕ್ಕೆ ಸಿಗುವ ವೇತನ ಪಡೆದು, ಜತೆಗೆ ಲಾಭದ ಒಂದಂಶವನ್ನು ಗಳಿಸುತ್ತಾನೆ.
ಕಿಬೂತ್‌ನಲ್ಲಿ ಕಾಣುವ ಮನೆಗಳೆಲ್ಲ ಒಂದೇ ಮಾದರಿ. ಅದಕ್ಕೆ ವಿದ್ಯುತ್, ನೀರು ಇತರ ಮೂಲಸೌಲಭ್ಯ ಕಲ್ಪಿಸುವುದು ಮುಖ್ಯ ಸಮಿತಿ ಹೊಣೆ. ಇದಕ್ಕೂ ಮೀರಿ ಏನಾದರೂ ಐಷಾರಾಮಿ ಸಾಧನಗಳು ಬೇಕೆಂದರೆ ಅದನ್ನು ವೈಯಕ್ತಿಕವಾಗಿ ಖರೀದಿಸಿಕೊಳ್ಳಬೇಕು. ‘ಸಾಮಾಜಿಕ ಭದ್ರತೆ’ ಯೋಜನೆಯಲ್ಲಿ ವೃದ್ಧರನ್ನು ಜತನದಿಂದ ನೋಡಿಕೊಳ್ಳುವುದು, ಅವರ ಸೇವೆಗೆಂದು ನಿಯೋಜಿಸುವ ಉದ್ಯೋಗಿಗಳಿಗೆ ವೇತನ ನೀಡುವುದು ಇನ್ನೊಂದು ವಿಶೇಷ. ತಮ್ಮ ಕೈಲಾಗುವಷ್ಟು ಕೆಲಸ ಮಾಡಬಯಸುವ ವೃದ್ಧರಿಗೆ ತರಕಾರಿ ಹೆಚ್ಚುವುದು, ಮಕ್ಕಳಿಗೆ ಕಥೆ ಹೇಳುತ್ತ ಮನರಂಜನೆ ನೀಡುವ ಕೆಲಸ ಕೊಡಲಾಗುತ್ತದೆ.
ಸಾವಿರ ಜನರು ಇರುವ ‘ನಾನ್‌ದನ್’ ಕಿಬೂತ್, ಇಸ್ರೇಲ್‌ನಲ್ಲಿ (ಅಥವಾ ಜಗತ್ತಿನಲ್ಲಿ) ಅತಿ ದೊಡ್ಡದು. ಇದೇ ರೀತಿ ನೂರು, ಇನ್ನೂರು, ಐನೂರು ಜನರು ಇರುವ ಕಿಬೂತ್‌ಗಳು ಇಸ್ರೇಲಿನ ತುಂಬ ವ್ಯಾಪಿಸಿವೆ. ಪಟ್ಟಣದಲ್ಲಿ ಬೆಳೆದ ಯುವಕ–ಯುವತಿಯರು ಕಿಬೂತ್‌ನ ತತ್ವ–ಆದರ್ಶಕ್ಕೆ ಮನಸೋತು ಸೇರುತ್ತಾರೆ. ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶ. ಇದಕ್ಕೆ ವ್ಯತಿರಿಕ್ತವಾಗಿ ಕಿಬೂತ್‌ನಲ್ಲಿ ಬೆಳೆದ ತರುಣ ತರುಣಿಯರು ಪಟ್ಟಣದ ವ್ಯಾಮೋಹಕ್ಕೆ ಮನಸೋತು ಹೊರನಡೆದ ನಿದರ್ಶನಗಳೂ ಇವೆ. ಅಂಥವರಿಗೆ ಯಾವುದೇ ನಿರ್ಬಂಧವನ್ನು ಕಿಬೂತ್ ಹಾಕುವುದಿಲ್ಲ. ಕಾಲಕ್ಕೆ ತಕ್ಕಂತೆ ನೀತಿ ನಿಯಮಗಳನ್ನೆಲ್ಲ ಪರಿಷ್ಕರಣೆ ಮಾಡಿಕೊಳ್ಳುತ್ತ ಕಿಬೂತ್‌ಗಳು ಬದಲಾದ ಸಮಯದೊಂದಿಗೆ ಹೆಜ್ಜೆ ಹಾಕುತ್ತಿವೆ.
ಆಧುನಿಕ ಯುಗ ತಂದೊಡ್ಡುವ ಯಾವುದೇ ಸವಾಲು ಎದುರಿಸಲು ಇಸ್ರೇಲ್‌ನ ಕಿಬೂತ್‌ಗಳು ಯತ್ನಿಸುತ್ತಲೇ ಇವೆ. ಜಗತ್ತನ್ನು ಒಂದು ಹಳ್ಳಿಯಾಗಿಸುವ ಜಾಗತೀಕರಣದ ಎದುರಿಗೆ, ಮರಳುಗಾಡಿನಲ್ಲಿ ಜೀವಜಗತ್ತನ್ನು ಸೃಷ್ಟಿಸಿದ ಕಿಬೂತ್‌ಗಳು ಇನ್ನೆಷ್ಟು ಕಾಲ ಅಸ್ತಿತ್ವದಲ್ಲಿ ಇದ್ದಾವು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತು. ಕುರ್ಚಿಯಲ್ಲಿ ಕುಳಿತು ನಮ್ಮೊಂದಿಗೆ ಮಾತಾಡುತ್ತಿದ್ದ ೭೫ ವರ್ಷದ ಒಶೊವ್ ಎದುರು ಈ ಪ್ರಶ್ನೆ ಇಟ್ಟೆವು.
‘... ಇಲ್ಲ. ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದ ಅವರು ಅಲ್ಲಿದ್ದ ಬೃಹತ್ ಮರದತ್ತ ದೃಷ್ಟಿ ಹಾಯಿಸಿ ಮುಗುಳ್ನಕ್ಕರು.
ಅದು 80 ವರ್ಷಗಳ ಹಿಂದೆ ನಾನ್ ಹಾಗೂ ದನ್ ಎಂಬಿಬ್ಬರು ಇಲ್ಲಿ ಕಿಬೂತ್ ಸ್ಥಾಪಿಸುವ ದಿನದಂದು ನೆಟ್ಟಿದ್ದ ಸಸಿ. ಈಗ ಹೆಮ್ಮರವಾಗಿ ಬೆಳೆದಿತ್ತು. ಹತ್ತಾರು ಮಕ್ಕಳು ಅದರ ಸುತ್ತ ಸುತ್ತುತ್ತ ಕೇಕೆ ಹಾಕುತ್ತ ಆಟವಾಡುತ್ತಿದ್ದರು.


ಕೃಪೆ : ಅನಂದ ತೀರ್ಥ ಪ್ಯಾಟಿ 
ಪ್ರಜಾವಾಣಿ ತಾ: 07/13/2014

ಕಿಬೂತ್‌ನ ಡೇರಿ ಜಗತ್ತು

ಹರಿಯುತಿದೆ ನೋಡಾ ಹಾಲಿನ ಹೊಳೆ...

ದಕ್ಷಿಣ ಇಸ್ರೇಲಿನ ನೆಗೆವ್‌ ಪ್ರಾಂತ್ಯದಲ್ಲಿರುವ ಯೊತ್ವತಾ ಕಿಬೂತ್‌ನ ಡೇರಿ ವಿಶಾಲ ಜಾಗದಲ್ಲಿ ಹಾಯಾಗಿ ಮಲಗಿದ್ದ ಹಸುಗಳು, ಮೇಲೆ ಬೃಹತ್ ಫ್ಯಾನ್, ಸರಳುಗಳ ಮೂಲಕ ಕೆಲ ಆಕಳು ಕತ್ತು ಹೊರ ಚಾಚಿ ಮೇವು ತಿನ್ನುತ್ತಿದ್ದವು. ಆ ಮೇವನ್ನು ಹಿಡಿಯೊಂದರಲ್ಲಿ ತೆಗೆದುಕೊಂಡ ರೈತ ಡೇನಿಯಲ್ ವಾರ್ನರ್, ಮೂಸಿ ನೋಡಿ ‘ಆಹ್..!’ ಎಂದು ಉದ್ಗರಿಸಿದರು. ಜತೆಗಿದ್ದ ಜೈಪುರದ ಪತ್ರಕರ್ತ ಎಸ್.ಪಿ. ಸಿಂಗ್ ಮುಖ ಸಿಂಡರಿಸಿಕೊಂಡ. ಅದನ್ನು ಗಮನಿಸಿದ ವಾರ್ನರ್ ‘ನೀವೂ ನೋಡಿ’ ಎಂದು ಆಹ್ವಾನಿಸಿದರು. ಬೇರೇನೂ ತೋಚದೇ ಹಿಡಿಯಷ್ಟು ಮೇವನ್ನು ತೆಗೆದುಕೊಂಡು ಪರಿಮಳ ಆಘ್ರಾಣಿಸಿದಾಗ ‘ವಾಹ್..!’ ಎಂಬ ಉದ್ಗಾರ ತನ್ನಿಂತಾನೇ ಹೊರಟಿತು. ಊಟ ಮಾಡಿದ ಬಳಿಕ ಉಳಿಯುವ ಪದಾರ್ಥ ಸುರಿಯುವ ಅಕ್ಕಚ್ಚು (ಕಲಗಚ್ಚು) ಮುಂದಿಟ್ಟರೆ ಅದನ್ನೇ ಹೀರುವ ನಮ್ಮಲ್ಲಿನ ಆಕಳುಗಳು ತಕ್ಷಣ ನೆನಪಾದವು. ನಮ್ಮ ಹಸುಗಳಿಗೆ ಸಿಗದ ಭಾಗ್ಯ ಇವುಗಳಿಗೆ ಸಿಕ್ಕಿದ್ದು ಕಂಡು ಅಸೂಯೆಯೂ ಆಯಿತು. ಇಸ್ರೇಲಿನಲ್ಲಿ ಇತರ ಉದ್ಯಮಗಳಂತೆಯೇ ಡೇರಿ ಕೂಡ ಪ್ರಮುಖ ಆದಾಯದ ಮೂಲ. ಬರೀ ಹಾಲಿನ ಉತ್ಪಾದನೆ­ ಗಮನದಲ್ಲಿ ಇಟ್ಟುಕೊಳ್ಳದೇ, ಅದರ ಹಲವಾರು ಉತ್ಪನ್ನಗಳತ್ತ ಸಂಶೋಧನೆ ನಡೆಯುತ್ತಲೇ ಇರುತ್ತದೆ. ಒಂದೆಡೆ ಉತ್ಪಾದನೆ ಹೆಚ್ಚಳ, ಇನ್ನೊಂದೆಡೆ ಹಾಲಿನ ಉತ್ಪನ್ನಗಳ ಹೆಚ್ಚಳ. ಇದು ಇಸ್ರೇಲಿನ ವೈಶಿಷ್ಟ್ಯ. ಮೇವಿಗಾಗಿ ಜಾನುವಾರುಗಳು ಇಲ್ಲಿ ತಿರುಗಾಡುವು­ದಿಲ್ಲ. ಏಕೆಂದರೆ ಅರ್ಧಕ್ಕೂ ಹೆಚ್ಚು ಭಾಗ ಏನೂ ಬೆಳೆಯದ ಮರಳುಗಾಡು. ಇದರಿಂದಾಗಿ ಡೇರಿಯನ್ನು ವ್ಯವಸ್ಥಿತವಾಗಿ ರೂಪಿಸುವ ಅನಿವಾರ್ಯತೆ ಇದೆ. ಪಶುಪಾಲನಾ ಇಲಾಖೆಯು ಡೇರಿ ಉದ್ಯಮದಾರರ ಜತೆಗೂಡಿ ಶಿಸ್ತುಬದ್ಧ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ‘ಪ್ರತಿಯೊಂದು ಡೇರಿಯಲ್ಲಿ ಅಳವಡಿಸಿದ ದೊಡ್ಡ ಫ್ಯಾನ್, ಬೇಕೆಂದಾಗ ಬಿಸಿಲು ಬೀಳಲು ಅವಕಾಶ ಕೊಡುವ ಛಾವಣಿ, ನಲ್ಲಿ ನೀರು, ಮೈತೊಳೆಯುವ ಯಂತ್ರ... ಹೀಗೆ ಇಲ್ಲಿ ಆಕಳುಗಳಿಗೆ ಕೊಡುವ ಪ್ರತಿ ಸೌಲಭ್ಯದ ಹಿಂದೆಯೂ ಲೆಕ್ಕಾಚಾರವಿದೆ. ಅದ್ಕಾಗಿಯೇ ನಮ್ಮಲ್ಲಿ ಡೇರಿ ಉದ್ಯಮ ಇಷ್ಟೊಂದು ಲಾಭದಾಯಕವಾಗಿ ನಡೆಯುತ್ತಿದೆ’ ಎನ್ನುತ್ತಾರೆ ಇಸ್ರೇಲ್ ಜಾನುವಾರು ಸಾಕಣೆ ಸಂಘಟನೆಯ ವ್ಯವಸ್ಥಾಪಕ ಯಕೊವ್ ಬಚರ್. * * * ವೈಯಕ್ತಿಕವಾಗಿ ರೈತರು ಹಸು ಸಾಕಣೆ ಮಾಡುವುದು ತೀರಾ ಕಡಿಮೆ. ರೈತರ ಸಹಕಾರ ಸಂಘ (ಮಶಾವ್‌)ಗಳು ನೂರರಿಂದ ಇನ್ನೂರು ಆಕಳು ಸಾಕಿದರೆ, ಸಮುದಾಯ ಒಡೆತನ ವ್ಯವಸ್ಥೆ ಹೊಂದಿರುವ ‘ಕಿಬೂತ್’ಗಳು ಸಾವಿರ ಆಕಳು ಪಾಲನೆ ಮಾಡುವುದೂ ಉಂಟು. ಎಲ್ಲ ಆಕಳುಗಳನ್ನೂ ಪಶುಪಾಲನಾ ಇಲಾಖೆಯಲ್ಲಿ ನೋಂದಾಯಿಸಬೇಕು. ಪ್ರತಿಯೊಂದಕ್ಕೂ ಒಂದೊಂದು ಗುರುತಿನ ಸಂಖ್ಯೆ ಕೊಡಲಾಗುತ್ತದೆ. ಯಾವ ಸಮಯದಲ್ಲಿ ಎಂಥ ಆಹಾರ ಕೊಡಬೇಕು ಎಂಬುದನ್ನು ಮೊದಲೇ ನಿಗದಿ ಮಾಡಲಾಗಿರುತ್ತದೆ. ಅದಕ್ಕೆ ತಕ್ಕಂತೆ ಆಹಾರ ಪೂರೈಸುವುದು ಪಶುಪಾಲನಾ ಇಲಾಖೆಯ ಪ್ರಾದೇಶಿಕ ಕೇಂದ್ರಗಳ ಜವಾಬ್ದಾರಿ. ಹಾಲು ಕೊಡುವ, ಗರ್ಭ ಧರಿಸಿದ ಅಥವಾ ಕರು ಇಲ್ಲದ ಆಕಳುಗಳಿಗೆ ಪ್ರತ್ಯೇಕ ಆಹಾರ. ಇನ್ನು ಬೆಳೆಯುತ್ತಿರುವ ಕರುಗಳಿಗೂ ಬೇರೆಯದೇ ಆಹಾರ. ‘ಯುನಿಫೀಡ್ ವ್ಯಾಗನ್’ ಎಂಬ ಸಂಚಾರಿ ಘಟಕಗಳು ಡೇರಿ ಇರುವಲ್ಲಿಗೇ ಬಂದು, ಪ್ರತ್ಯೇಕ ಆಹಾರ ತಯಾರಿಸಿ, ಕೊಟ್ಟು ಹೋಗುತ್ತವೆ. ಈ ಆಹಾರವಾದರೂ ಏನು? ಗೋಧಿ ಹಾಗೂ ಮೆಕ್ಕೆಜೋಳದ ಪೈರು ಪ್ರಮುಖ ಭಾಗ. ಇದರೊಂದಿಗೆ ದ್ವಿದಳ ಧಾನ್ಯ, ಕಿತ್ತಳೆ, ದಾಳಿಂಬೆ ಹಣ್ಣುಗಳ ಸಿಪ್ಪೆ, ಬೇಕರಿಗಳಲ್ಲಿ ಉಳಿದ ಪದಾರ್ಥ, ಸಕ್ಕರೆ, ಖರ್ಜೂರದ ಅವಶೇಷ, ಅಲ್ಪ ಪ್ರಮಾಣದ ಗೋಧಿ, ಕಳೆತ ಹುಲ್ಲು. ಹಸುವಿಗೆ ಸಿಗಬೇಕಾದ ಪೋಷಕಾಂಶಗಳಿಗೆ ತಕ್ಕಂತೆ ಇದನ್ನೆಲ್ಲ ಹದವಾಗಿ ಬೆರೆಸಿ ಕೊಡಲಾಗುತ್ತದೆ. ‘ನಾವು ಆಕಳಿನಿಂದ ಬಯಸುವುದು ಪೌಷ್ಟಿಕ ಆಹಾರ. ಅದನ್ನು ಉತ್ಪಾದಿಸಲು ತಕ್ಕ ಆಹಾರ ಕೊಡಬೇಕಲ್ಲವೇ?’ ಎಂಬ ಪ್ರಶ್ನೆ ಅರವಾ ಮಶಾವ್‌ನ ಕೃಷಿ ಸಮಿತಿ ಮುಖ್ಯಸ್ಥ ಶಮಿ ಬರ್ಕಾನ್ ಅವರದು. ಸರ್ವಂ ಯಂತ್ರಮಯಂ ಆಕಳುಗಳನ್ನು ಶುಚಿಗೊಳಿಸುವುದರಿಂದ ಹಿಡಿದು ಹಾಲು ಕರೆಯುವವರೆಗೆ ಯಂತ್ರಗಳ ಬಳಕೆಯಿದೆ. ಹಾಲು ಕರೆಯುವ ಸ್ಥಳಕ್ಕೆ ಹಸು ಬಂದು ನಿಲ್ಲುತ್ತಲೇ ಅದರ ಮುಂದಿನ ಬಲಗಾಲಿಗೆ ಕಟ್ಟಿರುವ ‘ಸೆನ್ಸರ್’, ಪಕ್ಕದಲ್ಲಿನ ಯಂತ್ರಕ್ಕೆ ಅದರ ಎಲ್ಲ ಮಾಹಿತಿ ರವಾನಿಸುತ್ತದೆ. ಆಕಳ ಕೆಚ್ಚಲು ಸ್ವಚ್ಛಗೊಳಿಸಿ ಕೊಳವೆಗಳನ್ನು ಹಚ್ಚುತ್ತಲೇ ಹಾಲು ಕರೆಯುವ ಕೆಲಸ ಶುರು. ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದರೆ ಎಲ್ಲ ವಿವರ ಅದರ ಹಿಂದಿರುವ ಯಂತ್ರದ ಮೇಲೆ ಮೂಡುತ್ತದೆ. ಹಿಂದಿನ ದಿನ ಕೊಟ್ಟ ಹಾಲು ಎಷ್ಟು? ಕಡಿಮೆ ಕೊಟ್ಟಿದ್ದರೆ ಯಾಕೆ? ಅದಕ್ಕೆ ತೆಗೆದುಕೊಂಡ ಕ್ರಮಗಳೇನು? ಇನ್ನೇನಾದರೂ ಚಿಕಿತ್ಸೆ ಕೊಡಬೇಕೇ? ಎಂಬಿತ್ಯಾದಿ ವಿವರಗಳೆಲ್ಲ ಕಿರುತೆರೆ ಮೇಲೆ ಮೂಡುತ್ತವೆ. ಪ್ರತಿಯೊಂದು ಆಕಳಿಗೆ ನೋಂದಾಯಿತ ಗುರುತಿನ ಸಂಖ್ಯೆ ಇರುವುದರಿಂದ ಎಲ್ಲ ಹಸುಗಳ ಸಂಪೂರ್ಣ ವಿವರಗಳನ್ನು ಎಲ್ಲಾದರೂ ಕುಳಿತು ಪರಿಶೀಲಿಸಬಹುದು. ಹಾಲಿನ ದರ ನಿಗದಿ ಮಾಡುವ ಮುನ್ನ ಸರ್ಕಾರ ರೈತ ಪ್ರತಿನಿಧಿಗಳ ಜತೆ ಸೇರಿ ಚರ್ಚೆ ನಡೆಸುತ್ತದೆ. ಹಾಲನ್ನು ನೇರವಾಗಿ ಮಾರಾಟ ಮಾಡುವ ಬದಲಿಗೆ ಹಾಲು ಆಧಾರಿತ ಪದಾರ್ಥಗಳನ್ನು ಉತ್ಪಾದಿಸಿದರೆ ಲಾಭ ಹೆಚ್ಚು ಎಂಬುದನ್ನು ರೈತರು ಕಂಡುಕೊಂಡಿದ್ದಾರೆ. ಹೀಗಾಗಿ ಹಾಲು ಸಂಸ್ಕರಣೆ, ಸಂಗ್ರಹ ವ್ಯವಸ್ಥೆ ಮಾಡಿಕೊಂಡ ಕೆಲವು ‘ಕಿಬೂತ್’ ಹಾಗೂ ‘ಮಶಾವ್’ಗಳು ಬೇರೆ ಬೇರೆ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗಿವೆ. ರೈತರಲ್ಲಿನ ಆಸಕ್ತಿ ಹಾಗೂ ಹೊಸರುಚಿ ಹುಡುಕಾಟದಿಂದ ಪ್ರತಿ ವರ್ಷವೂ ವಿಶಾಲ ಶ್ರೇಣಿಯ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಕುದುರಿದೆ. ಅಂದ ಹಾಗೆ, ಕಳೆದ ವರ್ಷ ಹಾಲಿನಿಂದ ೮೫೦ ಬಗೆಯ ಡೇರಿ ಪದಾರ್ಥಗಳನ್ನು ಉತ್ಪಾದಿಸಲಾಗಿದೆಯಂತೆ! ‘ಇನ್ನೆರಡು ವರ್ಷಗಳಲ್ಲಿ ಆ ಸಂಖ್ಯೆ ಸಾವಿರದ ಗಡಿಯನ್ನು ದಾಟಬೇಕು ಎಂಬ ಗುರಿ ನಮ್ಮದು’ ಎಂದು ನೆಗೆವ್ ಪ್ರದೇಶವೊಂದರ ಮಶಾವ್‌ನ ರೈತ ರಫೇಲಿ ಹೇಳುತ್ತ, ೫೦ಕ್ಕೂ ಹೆಚ್ಚು ತಿನಿಸುಗಳಿದ್ದ ಪ್ಯಾಕೆಟ್ ಕೊಟ್ಟರು. ತಿಂಗಳತನಕ ಹಾಳಾಗದಂತೆ ಮಾಡಿದ ಪ್ಯಾಕಿಂಗ್ ಮನ ಸೆಳೆಯುವಂತಿತ್ತು. ಹತ್ತಾರು ದೇಶಗಳಲ್ಲಿ ಬೇಡಿಕೆಯುಳ್ಳ ಯಾವುದೇ ಕೃಷಿ ಉತ್ಪನ್ನಕ್ಕೂ ಅಷ್ಟೇ ಶ್ರೇಷ್ಠ ಗುಣಮಟ್ಟ ಹಾಗೂ ಅಂದ-–ಚೆಂದದ ಪ್ಯಾಕಿಂಗ್ ಅಲ್ಲಿನದು. ಕುರಿಗೊಬ್ಬರ ‘ಮೌಲ್ಯವರ್ಧನೆ’ ಹಾಲಿನ ಉತ್ಪಾದನೆಗೆ ಡೇರಿ, ಮಾಂಸಕ್ಕಾಗಿ ಕುರಿ–-ಆಡು ಸಾಕಣೆ ಮಾಡಲಾಗುತ್ತದೆ. ಒಂದೂವರೆ ಸಾವಿರ ಕುರಿಗಳನ್ನು ಸಾಕುವ ಸ್ಥಳವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿ ಗೊಬ್ಬರದ ಮೌಲ್ಯವರ್ಧನೆ ನಡೆಯುತ್ತಿತ್ತು. ಹೌದು! ಕುರಿ ಹಿಕ್ಕೆ ಶ್ರೇಷ್ಠ ಗೊಬ್ಬರ ಎಂಬುದೇನೋ ಸರಿ. ಆದರೆ ಅದಕ್ಕೂ ಮೌಲ್ಯವರ್ಧನೆ ಮಾಡುವುದೆಂದರೆ? ‘ಹೌದು. ಹೀಗೆ ಮಾಡಿದರೆ ಇದಕ್ಕಿರುವ ಬೆಲೆ ಯಾವುದಕ್ಕೂ ಇಲ್ಲ!’ ಎನ್ನುತ್ತಾರೆ, ಕುರಿ ಸಾಕಣೆಗಾರ ಮೊಹಾಮ್. ಕುರಿ ಹಿಕ್ಕೆಗಳನ್ನು ಚಿೀಲದಲ್ಲಿ ತುಂಬಿ, ಅದಕ್ಕೆ ಒಂದಷ್ಟು ‘ಪೋಷಕಾಂಶ’ ಬೆರೆಸಿ ಯಂತ್ರದಿಂದ ಗಾಳಿ ಹಾಯಿಸುತ್ತಾರೆ. ಬಳಿಕ ಎರಡೂ ತುದಿ ಕಟ್ಟಿ ೧೫ ದಿನ ಬಿಡುತ್ತಾರೆ. ಇದೀಗ ಅತ್ಯುತ್ಕೃಷ್ಟ ಗೊಬ್ಬರ. ಸಾಮಾನ್ಯ ಗೊಬ್ಬರಕ್ಕಿಂತ ಹತ್ತಾರು ಪಟ್ಟು ಇದು ಹೆಚ್ಚು ಪೋಷಕಾಂಶ ಒಳಗೊಂಡಿರುತ್ತದೆ. ಗೊಬ್ಬರವನ್ನು ಹೀಗೂ ‘ಮೌಲ್ಯವರ್ಧನೆ’ ಮಾಡಬಹುದಲ್ಲವೇ?

ಕೃಪೆ : ನರೇಂದ್ರ  ನಾಣಿ ಬ್ಲಾಗ್ನಿಂದ 
http://krushibesayamahiti.blogspot.in/2014/03/blog-post_1397.html