ಭಾರತೀಯ ಜೀವನಶೈಲಿಯ ಅಗ್ಗಳಿಕೆಗಳ ಬಗ್ಗೆ ಮಾತನಾಡುವವರು ಅವಿಭಕ್ತ
ಕುಟುಂಬಗಳನ್ನು ಭಾವುಕತೆಯಿಂದ ಬಣ್ಣಿಸುವುದಿದೆ. ಆದರೆ, ನಗರೀಕರಣದ ಭರಾಟೆಯಲ್ಲಿ
ಅವಿಭಕ್ತ ಕುಟುಂಬದ ಪರಿಕಲ್ಪನೆ ನಮ್ಮಲ್ಲಿ ಸವಕಲಾಗುತ್ತಿದ್ದರೆ, ಇಸ್ರೇಲ್ನಲ್ಲಿನ
‘ಕಿಬೂತ್’ಗಳೆನ್ನುವ ‘ಮಹಾಮನೆ’ಗಳು ಆಧುನಿಕ ಕಾಲಘಟ್ಟದ ವಿಸ್ಮಯದಂತೆ ಕಾಣಿಸುತ್ತವೆ.
ನೂರಾರು ಕುಟುಂಬಗಳು ಒಟ್ಟಿಗೆ ದುಡಿಯುವ ಹಾಗೂ ಗಳಿಕೆಯನ್ನು ಸಮಾನವಾಗಿ ಹಂಚಿಕೊಳ್ಳುವ ಈ
ಕಿಬೂತ್ಗಳ ಪರಿಕಲ್ಪನೆಯಲ್ಲಿ ಎದ್ದುಕಾಣಿಸುವುದು ಅಪ್ಪಟ ಮನುಷ್ಯ ಪ್ರೀತಿ.
ಬೆಟ್ಟದ ತುದಿಯಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಆ ಮರ, ಸಮಷ್ಟಿ ಹಿತದ ಕಥೆ
ಹೇಳುತ್ತಿತ್ತು. ಜಗತ್ತು ಒಂದು ಕುಟುಂಬ ಎಂಬ ಮಾತು ಪದೇ ಪದೇ ಕೇಳುತ್ತೇವಾದರೂ, ಅದರ
ಸ್ವರೂಪ ಇಲ್ಲಿ ಮೈದಳೆದಿತ್ತು. ಆ ಮರದಡಿ ಹುಲ್ಲುಗಾವಲಿನಲ್ಲಿ ಕುಳಿತಿದ್ದ ನಮ್ಮೆದುರು
ಅಚ್ಚರಿಯ ಲೋಕವೊಂದು ತೆರೆದಿತ್ತು. ಬರಿಗೈಯಲ್ಲಿ ಮರಳುಗಾಡಿಗೆ ಬಂದ ಕೆಲವೇ ಜನರು,
ಸಮಾನತೆ ತತ್ವ ಆಧರಿಸಿ ಸಮುದಾಯವೊಂದನ್ನು ಕಟ್ಟಿ ಬೆಳೆಸಿದ ಅಪೂರ್ವ ಕಥನವದು. ನಾನು,
ನನ್ನದು ಎಂಬ ಭಾವ ತುಂಬಿರುವ ಜಗತ್ತಿನಲ್ಲಿ ಸಮಾನತೆ ಪರಿಕಲ್ಪನೆ ಸಾಧಿಸಿದ ಇಸ್ರೇಲಿನ
‘ಕಿಬೂತ್’ ಮಾದರಿ ಸೋಜಿಗಗೊಳಿಸುವಂಥದು.
‘ನಾವೀಗ ಜಗತ್ತಿನ ಅತಿ ದೊಡ್ಡ ಕಿಬೂತ್ನೊಳಗೆ ಬಂದಿದ್ದೇವೆ’ ಎಂದು ಜತೆಗಿದ್ದ
ಅಮ್ನಾನ್ ಹೇಳಿದಾಗ, ಅಕ್ಕಪಕ್ಕ ಕಂಡಿದ್ದು ಒಂದೇ ಅಳತೆ, ಆಕಾರದ ಹತ್ತಾರು ಮನೆಗಳು.
ಸ್ವಲ್ಪ ದೂರ ಸಾಗಿ ವಾಹನ ನಿಂತಾಗ ನಗುಮುಖದಿಂದ ಸ್ವಾಗತಿಸಿದ ವ್ಯಕ್ತಿಯೊಬ್ಬ, ‘ನಾನು
ರಾಮ್‘ ಎಂದ. ಅರೆ! ಇಸ್ರೇಲ್ನಲ್ಲೂ ರಾಮ ರಾಮ! ಆತ ಕೃಷಿ ಸಮಿತಿ ಮುಖ್ಯಸ್ಥ.
ನಾವಿದ್ದುದು ‘ನಾನ್ದನ್ ಕಿಬೂತ್’.
ಒಗ್ಗಟ್ಟಾಗಿ ದುಡಿಯುವ ಹಾಗೂ ಪಡೆದಿದ್ದನ್ನು ಸಮಾನವಾಗಿ ಹಂಚಿಕೊಳ್ಳುವ
ಉದ್ದೇಶದೊಂದಿಗೆ ರೂಪುಗೊಂಡ ಕಿಬೂತ್ ವಿಧಾನಕ್ಕೆ ಈಗ ನೂರು ವರ್ಷಗಳ ಇತಿಹಾಸ.
ಇಸ್ರೇಲಿನಲ್ಲಿ 273 ಕಿಬೂತ್ಗಳಿವೆ. ಎಲ್ಲದರ ನಿಯಮಾವಳಿ ಒಂದೇ. ಕಾಲಕ್ಕೆ ತಕ್ಕಂತೆ
ತಮ್ಮ ಆಶೋತ್ತರಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡರೂ ಕಿಬೂತ್ಗಳ ಮೂಲ
ಉದ್ದೇಶದಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲ.
|
ಕಿಬೂತ್ ಪದ್ಧತಿ ಆರಂಭದ ದಿನಗಳನ್ನು ಕಿನರ್ನೆಟ್ ಎಂಬಾಕೆ ಹೀಗೆ ದಾಖಲಿಸಿದ್ದಾಳೆ: ‘ಓಹ್! ಆ ದಿನಗಳು ಅದೆಷ್ಟು ಸುಂದರವಾಗಿದ್ದವು! ಹಗಲೆಲ್ಲ ಮೈಮುರಿದು ದುಡಿಯುತ್ತಿದ್ದೆವು. ರಾತ್ರಿ ಮರಳುಗಾಡಿನಲ್ಲಿ ಬೆಂಕಿ ಹೊತ್ತಿಸಿ ಅದರ ಸುತ್ತ ಕುಳಿತು ಬೆಳಕಿನಲ್ಲಿ ಹಾಡು ಹಾಡುತ್ತ ಮಾತಾಡುತ್ತಿದ್ದೆವು. ನಾಳೆ ಮಾಡಬೇಕಾದ ಕೆಲಸದ ಬಗ್ಗೆ ಒಮ್ಮತದಿಂದ ನಿರ್ಧರಿಸಿದ ಬಳಿಕ ಮೌನ ಅಲ್ಲಿ ನೆಲೆಯೂರುತ್ತಿತ್ತು. ಆಗಾಗ್ಗೆ ಕಟ್ಟಿಗೆಯಿಂದ ಸಿಡಿಯುತ್ತಿದ್ದ ಕಿಡಿಯು ಸಣ್ಣದಾಗಿದ್ದರೂ ದೇದೀಪ್ಯಮಾನ ಬೆಳಕನ್ನು ಸೂಸಿದಂತೆ ಭಾಸವಾಗುತ್ತಿತ್ತು. ನಮ್ಮ ಮನದ ಸಣ್ಣ ಬಯಕೆಯು ಮುಂದೆ ಬೃಹತ್ ಸ್ವರೂಪ ಪಡೆಯಲಿದೆ ಎಂಬುದರ ಸಂಕೇತದಂತೆ ಆ ಕಿಡಿ ಗೋಚರಿಸುತ್ತಿತ್ತು’. |
ಮರಳುಗಾಡಿನ ಮಧ್ಯೆ ಕಷ್ಟಪಟ್ಟು ದುಡಿಯುತ್ತ, ಬಂದಿದ್ದನ್ನು ಹಂಚಿಕೊಂಡು ಸಹಜೀವನ
ಆರಂಭಿಸಿದ ಕಿಬೂತ್ಗಳು ಜನಪ್ರಿಯವಾದವು. ಇಸ್ರೇಲ್ ಸ್ಥಾಪನೆಯಾಗುವ ಹೊತ್ತಿಗೆ (1948)
ಹಲವು ಕಿಬೂತ್ಗಳು ಗಡಿಯುದ್ದಕ್ಕೂ ಸ್ಥಾಪನೆಯಾದವು. ಕಿಬೂತ್ ಎಂದರೆ ಹಿಬ್ರೂ
ಭಾಷೆಯಲ್ಲಿ ‘ಸಮುದಾಯ’ ಅಥವಾ ‘ಒಂದುಗೂಡುವುದು’ ಎಂದರ್ಥ. ಆರಂಭಿಕ ಹಂತದಲ್ಲಿ ಕಿಬೂತ್ಗಳ
ಪ್ರಮುಖ ಜೀವನಾಧಾರ ಉದ್ಯೋಗ ಕೃಷಿಯಾಗಿತ್ತು. ಬಳಿಕ ಆಧುನಿಕತೆಗೆ ಒಗ್ಗಿಕೊಂಡ
ಕಿಬೂತಿಯನ್ನರು, ಉದ್ಯಮಶೀಲತೆಯನ್ನು ಮೈಗೂಡಿಸಿಕೊಂಡರು. ಈಗಂತೂ ವ್ಯವಸಾಯದ ಜತೆಗೆ
ಎಲೆಕ್ಟ್ರಾನಿಕ್ಸ್, ಕೈಗಾರಿಕೆ, ಪ್ಲಾಸ್ಟಿಕ್ ಪದಾರ್ಥ, ಆಧುನಿಕ ಯಂತ್ರ ತಯಾರಿಕೆ,
ಪ್ರವಾಸೋದ್ಯಮ ನಿರ್ವಹಣೆ... ಹೀಗೆ ಅವರು ಪಾಲ್ಗೊಳ್ಳದ ಉದ್ಯಮವೇ ಇಲ್ಲ ಎನ್ನುವಂತಾಗಿದೆ.
ಅಂದರೆ, ಕಿಬೂತ್ ಇಲ್ಲದ ಇಸ್ರೇಲ್ ಊಹಿಸಿಕೊಳ್ಳಲೂ ಅಸಾಧ್ಯ.
ಕಿಬೂತ್ ಕಾರ್ಯವಿಧಾನ ಹಲವು ಅಚ್ಚರಿಗಳ ಕಂತೆ. ಅಲ್ಲಿನ ಬದುಕು, ಉದ್ಯೋಗ, ವಸತಿ,
ಊಟೋಪಚಾರ, ಮಕ್ಕಳ ಪಾಲನೆ, ವೃದ್ಧರ ಯೋಗಕ್ಷೇಮ, ಆದಾಯ, ಲಾಭಾಂಶ ಹಂಚಿಕೆ ಒಂದೊಂದೂ
ವಿಶಿಷ್ಟ. ಕಿಬೂತ್ ಜೀವನ ಶೈಲಿ ನೋಡಿದಾಗ ಒಗ್ಗಟ್ಟಾಗಿ ಹೀಗೂ ಇರಬಹುದೇ ಎಂಬ ಸೋಜಿಗ
ಮೂಡುತ್ತದೆ.
ಮುದ್ದುಮಕ್ಕಳು ‘ಇನ್ನು ಹತ್ತು ನಿಮಿಷ ಕಾಯಬಹುದಲ್ವಾ? ಮಕ್ಕಳು ಊಟ ಮಾಡಿದ ಮೇಲೆ ನಾವು ಕ್ಯಾಂಟೀನ್ಗೆ ಹೋಗೋಣ’ ಎಂದು ರಾಮ್ ಹೇಳಿದರು. ಕಾಯುತ್ತ ನಿಂತಿದ್ದಾಗ ತಂಗಾಳಿ ಸುಳಿದು, ಇದು ಮರುಭೂಮಿ ಮಧ್ಯೆಯೇ ಸೃಷ್ಟಿಯಾದ ನಂದನವನ ಎಂಬುದನ್ನು ನೆನಪಿಸಿತು. ಅಷ್ಟರಲ್ಲಿ ಮಕ್ಕಳ ಗುಂಪೊಂದು ನಗುತ್ತ, ಕೇಕೆ ಹಾಕುತ್ತ ಕ್ಯಾಂಟೀನ್ನಿಂದ ಹೊರಬಂತು. ಒಂದಲ್ಲ ಎರಡಲ್ಲ, ನೂರೈವತ್ತು ಮಕ್ಕಳು! ಈ ಮಕ್ಕಳು ಬೆಳೆಯುವುದು ಪ್ರತ್ಯೇಕವಾಗಿ; ಅಂದರೆ ಪಾಲಕರಿಂದ ಬೇರೆಯಾಗಿ!
ಮಗುವಿಗೆ ಒಂದೂವರೆ ವರ್ಷ ಆಗುತ್ತಲೇ ಅದನ್ನು ಕಿಬೂತ್ನ ಮಕ್ಕಳ ಪಾಲನಾಕೇಂದ್ರಕ್ಕೆ
ಸೇರಿಸಲಾಗುತ್ತದೆ. ಅಪ್ಪ–ಅಮ್ಮ ಬೇಕೆಂದಾಗ ನೋಡಿಕೊಂಡು ಬರಬಹುದು. ಇತರ ಮಕ್ಕಳೊಂದಿಗೆ
ಬೆಳೆಯುವ ಆ ಮಗುವಿಗೆ ಎಲ್ಲ ಬಗೆಯ ಸೌಲಭ್ಯ ಉಚಿತ. ಅದನ್ನು ಕಿಬೂತ್ ಒದಗಿಸಿಕೊಡುತ್ತದೆ.
‘ಮಕ್ಕಳನ್ನು ಪಾಲಿಸಲು ಹಲವರನ್ನು ನೇಮಿಸಲಾಗುತ್ತದೆ. ಅಲ್ಲಿ ಮಗುವಿಗೆ ಯಾವ ಕೊರತೆಯೂ
ಆಗದಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಕಲಿಸಿಕೊಡುವುದು
ಸಮಾನತೆ, ದೇಶಪ್ರೇಮವನ್ನು’ ಎನ್ನುತ್ತಾರೆ ಕೇಂದ್ರದ ಪಾಲಕ ಮೊಕ್ದಮ್. ನಾನ್ದನ್
ಕಿಬೂತ್ನಲ್ಲಿ ನಾಲ್ಕುನೂರು ಮಕ್ಕಳು ಇದ್ದಾರೆ.
ಬಣ್ಣಬಣ್ಣದ ಉಡುಪು ಧರಿಸಿದ್ದ ಮುದ್ದಾದ ಮಕ್ಕಳಿಗೆ ಟಾಟಾ ಹೇಳಿ ಕ್ಯಾಂಟೀನ್ ಒಳಹೊಕ್ಕಾಗ... ಓಹ್! ಅದೊಂದು ದೊಡ್ಡ ಹೋಟೆಲ್!
ಎಂಥ ಭೋಜನವದು! ಐವತ್ತಕ್ಕೂ ಹೆಚ್ಚು ಭಕ್ಯ್ಷಭೋಜ್ಯಗಳು, ಚಾಕಲೇಟ್, ಐಸ್ಕ್ರೀಮ್,
ಸೂಪ್... ‘ಇದರಲ್ಲಿ ಈಜುವ, ಓಡುವ, ಹಾರಾಡುವ ಜೀವಿಗಳಿಂದ ಮಾಡಿದ ತಿನಿಸು ಯಾವುದು?’
ಎಂದು ಪಕ್ಕಾ ವೆಜಿಟೇರಿಯನ್ ಮಿತ್ರ ತಿವಾರಿ ಚಿಂತೆಗೀಡಾದ. ಕೊನೆಗೆ ಆತನ ಹಸಿವು
ತಣಿಸಿದ್ದು ಹಸಿ ತರಕಾರಿ–ಸೊಪ್ಪು, ಯಥೇಚ್ಚ ಹಣ್ಣುಗಳು!
ದಿನಕ್ಕೆ ಒಂದು ಉಪಾಹಾರ, ಎರಡು ಊಟ, ಬಯಸಿದಾಗಲೆಲ್ಲ ಚಹ-ಕಾಫಿ. ಕಿಬೂತ್ನ ಸಾವಿರ
ಜನರಿಗೆ ಇದಿಷ್ಟನ್ನು ವರ್ಷದ ಎಲ್ಲ ದಿನಗಳಲ್ಲೂ ಕೊಡುವ ಕ್ಯಾಂಟೀನ್ ನಿರ್ವಹಣೆ ನೋಡಿಯೇ
ತಿಳಿಯಬೇಕು. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ಇರುತ್ತದೆ. ಕಿಬೂತ್ನಲ್ಲಿ ವಾಸಿಸುವ
ಎಲ್ಲರೂ (ನಾಲ್ಕೈದು ಕುಟುಂಬಗಳನ್ನು ಹೊರತುಪಡಿಸಿ) ಮನೆಯಲ್ಲಿ ಅಡುಗೆ ಮಾಡುವ ಗೋಜಿಗೆ
ಹೋಗುವುದಿಲ್ಲ. ಸಮಯಕ್ಕೆ ಸರಿಯಾಗಿ ಕ್ಯಾಂಟೀನ್ಗೆ ಹಾಜರಾಗುತ್ತಾರೆ. ಊಟ ಮಾಡಿ
ಹೋಗುತ್ತಾರೆ. ಪದಾರ್ಥ ಖರೀದಿ, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ
ಎಲ್ಲವನ್ನೂ ಸಮಿತಿಯೊಂದು ನಿರ್ವಹಿಸುತ್ತದೆ.
ಅಲ್ಲಿರುವ ತಿಂಡಿ-ತಿನಿಸುಗಳದೂ ಒಂದು ಲೋಕ. ‘ನೋಡಿ... ಊಟದ ವಿಷಯದಲ್ಲಿ ನಮ್ಮದು
ಶಿಸ್ತು! ಮಧ್ಯಾಹ್ನ ಮಾಡುವ ಅಡುಗೆ ಬೇರೆ; ರಾತ್ರಿ ಊಟಕ್ಕೆ ಮಾಡುವುದೇ ಬೇರೆ. ಎಲ್ಲರೂ
ಒಮ್ಮೆಲೇ ಕ್ಯಾಂಟೀನ್ಗೆ ಬರುವ ಹಾಗಿಲ್ಲ. ಅದಕ್ಕಾಗಿ ಮಧ್ಯಾಹ್ನ ಹಾಗೂ ರಾತ್ರಿ ತಲಾ
ಮೂರು ಸಮಯ ನಿಗದಿ ಮಾಡಿದ್ದೇವೆ. ಊಟದ ಜತೆಗೆ ಬಗೆಬಗೆಯ ಕೇಕ್, ಸೂಪ್, ಸಲಾಡ್, ಹಣ್ಣಿನ
ರಸ ಇದ್ದೇ ಇರುತ್ತದೆ’ ಎಂದು ಕ್ಯಾಂಟೀನ್ ಸಮಿತಿ ಸದಸ್ಯ ಉಶೇವ್ ಹೇಳಿದರು. ದಿನಕ್ಕೆ
ಎಷ್ಟು ಬಗೆ ತಿಂಡಿ–ತಿನಿಸು ತಯಾರಿಸುತ್ತೀರಿ ಎಂದು ಪ್ರಶ್ನಿಸಿದಾಗ, ‘ಕನಿಷ್ಠ ಮೂವತ್ತು
ಬಗೆ’ ಎಂದು ಉತ್ತರಿಸಿದರು!
ಮಕ್ಕಳು ವಿದ್ಯಾಭ್ಯಾಸ ಪೂರ್ಣಗೊಳಿಸುತ್ತಲೇ ಉದ್ಯೋಗ ಹಿಡಿಯುತ್ತಾರೆ. ಕೆಲವರು
ಕಿಬೂತ್ನಿಂದ ಹೊರಗೆ ಹೋದರೆ, ಇನ್ನಷ್ಟು ಪದವೀಧರರು ಕಿಬೂತ್ ನಿರ್ವಹಿಸುವ ಉದ್ಯಮಗಳಿಗೆ
ಸೇರುತ್ತಾರೆ. ಆ ಉದ್ಯಮಗಳೋ ಗುಂಡುಸೂಜಿ ತಯರಿಕೆಯಿಂದ ಹಿಡಿದು ಬೃಹತ್ ಯಂತ್ರ
ತಯಾರಿಕೆವರೆಗೂ ವ್ಯಾಪಿಸಿವೆ. ಇಸ್ರೇಲ್ನಲ್ಲಿ ಕೃಷಿ, ತೋಟಗಾರಿಕೆ ಹಾಗೂ ಡೇರಿ ಕೂಡ
ಉದ್ಯಮ ಸ್ವರೂಪದ ಪಡೆದಿರುವುದರಿಂದ ಆಸಕ್ತ ಯುವಕರು ಅದಕ್ಕೂ ಸೇರುತ್ತಾರೆ.| ಕಿಬೂತ್ ಸುತ್ತಮುತ್ತ... |
|---|
|
* ‘ಇಸ್ರೇಲ್ ಪಿತಾಮಹ’ ಎಂದೇ ಹೆಸರಾದ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್,
ರಾಜೀನಾಮೆ ನೀಡಿದ ಬಳಿಕ– ನೆಗೆವ್ ಮರುಭೂಮಿಯಲ್ಲಿನ ಎಸ್ಡೆ ಬೊಕೆರ್ ಕಿಬೂತ್ಗೆ
ಸೇರಿಕೊಂಡರು. ಅಲ್ಲಿ ಅವರು ನಿರ್ವಹಿಸುತ್ತಿದ್ದುದು ಬಟ್ಟೆ ತೊಳೆಯುವ ಕೆಲಸವನ್ನು! * ಕಿಬೂತ್ನಲ್ಲೇ ಜನಿಸಿದ ಯಹೂದ್ ಬರಾಕ್ ೧೯೯೯ರಿಂದ ೨೦೦೧ರವರೆಗೆ ಇಸ್ರೇಲ್ ಪ್ರಧಾನಿಯಾಗಿದ್ದರು. ಇಸ್ರೇಲ್ನ ಪ್ರಮುಖ ಸಚಿವರು, ಅಧಿಕಾರಿಗಳು ಕಿಬೂತ್ಗೆ ಸೇರಿದವರಾಗಿದ್ದಾರೆ. * ಇಸ್ರೇಲ್ನ ಒಟ್ಟು ಕೈಗಾರಿಕೆ ಉತ್ಪನ್ನಗಳ ಪೈಕಿ ಕಿಬೂತ್ ಪ್ರಮಾಣ ಶೇ ೯. ಕೃಷಿ ಉತ್ಪನ್ನಗಳ ಪ್ರಮಾಣ ಶೇ ೪೦. ಸುಮಾರು ಇನ್ನೂರು ಜನರು ಇರುವ ‘ಸಸಾ’ ಎಂಬ ಕಿಬೂತ್, ವಾರ್ಷಿಕ ೫,೦೦೦ ಕೋಟಿ ರೂಪಾಯಿ (೮೨೦ ದಶಲಕ್ಷ ಡಾಲರ್) ಮೊತ್ತದ ಮಿಲಿಟರಿ ಉಪಕರಣಗಳನ್ನು ತಯಾರಿಸುತ್ತಿದೆ. * ಜಗತ್ತಿನ ನೂರಾರು ದೇಶಗಳಿಗೆ ಹನಿ ನೀರಾವರಿ ಉಪಕರಣ ಪೂರೈಸುವ ಅತಿದೊಡ್ಡ ಕಂಪೆನಿ ‘ನೆಟಾಫೆಮ್’ ಸಂಸ್ಥಾಪಕರು ಕಿಬೂತಿಯನ್ನರು. * ಬರೀ ಯೆಹೂದಿಗಳನ್ನೇ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂಬ ನಿಯಮ ಪಾಲಿಸುತ್ತಿದ್ದ ಕಿಬೂತ್ಗಳು, ಕಾರ್ಮಿಕರ ಕೊರತೆಯಿಂದಾಗಿ ಆ ನಿಯಮವನ್ನು ಸರಳಗೊಳಿಸಿದ್ದಾರೆ. ಬೇರೆ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಂಡು, ಅವರಿಗೆ ಕೈತುಂಬ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. |
ಕಿಬೂತ್ನಲ್ಲಿ ಕಾಣುವ ಮನೆಗಳೆಲ್ಲ ಒಂದೇ ಮಾದರಿ. ಅದಕ್ಕೆ ವಿದ್ಯುತ್, ನೀರು ಇತರ ಮೂಲಸೌಲಭ್ಯ ಕಲ್ಪಿಸುವುದು ಮುಖ್ಯ ಸಮಿತಿ ಹೊಣೆ. ಇದಕ್ಕೂ ಮೀರಿ ಏನಾದರೂ ಐಷಾರಾಮಿ ಸಾಧನಗಳು ಬೇಕೆಂದರೆ ಅದನ್ನು ವೈಯಕ್ತಿಕವಾಗಿ ಖರೀದಿಸಿಕೊಳ್ಳಬೇಕು. ‘ಸಾಮಾಜಿಕ ಭದ್ರತೆ’ ಯೋಜನೆಯಲ್ಲಿ ವೃದ್ಧರನ್ನು ಜತನದಿಂದ ನೋಡಿಕೊಳ್ಳುವುದು, ಅವರ ಸೇವೆಗೆಂದು ನಿಯೋಜಿಸುವ ಉದ್ಯೋಗಿಗಳಿಗೆ ವೇತನ ನೀಡುವುದು ಇನ್ನೊಂದು ವಿಶೇಷ. ತಮ್ಮ ಕೈಲಾಗುವಷ್ಟು ಕೆಲಸ ಮಾಡಬಯಸುವ ವೃದ್ಧರಿಗೆ ತರಕಾರಿ ಹೆಚ್ಚುವುದು, ಮಕ್ಕಳಿಗೆ ಕಥೆ ಹೇಳುತ್ತ ಮನರಂಜನೆ ನೀಡುವ ಕೆಲಸ ಕೊಡಲಾಗುತ್ತದೆ.
ಸಾವಿರ ಜನರು ಇರುವ ‘ನಾನ್ದನ್’ ಕಿಬೂತ್, ಇಸ್ರೇಲ್ನಲ್ಲಿ (ಅಥವಾ ಜಗತ್ತಿನಲ್ಲಿ)
ಅತಿ ದೊಡ್ಡದು. ಇದೇ ರೀತಿ ನೂರು, ಇನ್ನೂರು, ಐನೂರು ಜನರು ಇರುವ ಕಿಬೂತ್ಗಳು ಇಸ್ರೇಲಿನ
ತುಂಬ ವ್ಯಾಪಿಸಿವೆ. ಪಟ್ಟಣದಲ್ಲಿ ಬೆಳೆದ ಯುವಕ–ಯುವತಿಯರು ಕಿಬೂತ್ನ ತತ್ವ–ಆದರ್ಶಕ್ಕೆ
ಮನಸೋತು ಸೇರುತ್ತಾರೆ. ಎಲ್ಲರಿಗೂ ಇಲ್ಲಿ ಮುಕ್ತ ಅವಕಾಶ. ಇದಕ್ಕೆ ವ್ಯತಿರಿಕ್ತವಾಗಿ
ಕಿಬೂತ್ನಲ್ಲಿ ಬೆಳೆದ ತರುಣ ತರುಣಿಯರು ಪಟ್ಟಣದ ವ್ಯಾಮೋಹಕ್ಕೆ ಮನಸೋತು ಹೊರನಡೆದ
ನಿದರ್ಶನಗಳೂ ಇವೆ. ಅಂಥವರಿಗೆ ಯಾವುದೇ ನಿರ್ಬಂಧವನ್ನು ಕಿಬೂತ್ ಹಾಕುವುದಿಲ್ಲ. ಕಾಲಕ್ಕೆ
ತಕ್ಕಂತೆ ನೀತಿ ನಿಯಮಗಳನ್ನೆಲ್ಲ ಪರಿಷ್ಕರಣೆ ಮಾಡಿಕೊಳ್ಳುತ್ತ ಕಿಬೂತ್ಗಳು ಬದಲಾದ
ಸಮಯದೊಂದಿಗೆ ಹೆಜ್ಜೆ ಹಾಕುತ್ತಿವೆ.
ಆಧುನಿಕ ಯುಗ ತಂದೊಡ್ಡುವ ಯಾವುದೇ ಸವಾಲು ಎದುರಿಸಲು ಇಸ್ರೇಲ್ನ ಕಿಬೂತ್ಗಳು
ಯತ್ನಿಸುತ್ತಲೇ ಇವೆ. ಜಗತ್ತನ್ನು ಒಂದು ಹಳ್ಳಿಯಾಗಿಸುವ ಜಾಗತೀಕರಣದ ಎದುರಿಗೆ,
ಮರಳುಗಾಡಿನಲ್ಲಿ ಜೀವಜಗತ್ತನ್ನು ಸೃಷ್ಟಿಸಿದ ಕಿಬೂತ್ಗಳು ಇನ್ನೆಷ್ಟು ಕಾಲ
ಅಸ್ತಿತ್ವದಲ್ಲಿ ಇದ್ದಾವು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತು. ಕುರ್ಚಿಯಲ್ಲಿ ಕುಳಿತು
ನಮ್ಮೊಂದಿಗೆ ಮಾತಾಡುತ್ತಿದ್ದ ೭೫ ವರ್ಷದ ಒಶೊವ್ ಎದುರು ಈ ಪ್ರಶ್ನೆ ಇಟ್ಟೆವು.‘... ಇಲ್ಲ. ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದ ಅವರು ಅಲ್ಲಿದ್ದ ಬೃಹತ್ ಮರದತ್ತ ದೃಷ್ಟಿ ಹಾಯಿಸಿ ಮುಗುಳ್ನಕ್ಕರು.
ಅದು 80 ವರ್ಷಗಳ ಹಿಂದೆ ನಾನ್ ಹಾಗೂ ದನ್ ಎಂಬಿಬ್ಬರು ಇಲ್ಲಿ ಕಿಬೂತ್ ಸ್ಥಾಪಿಸುವ ದಿನದಂದು ನೆಟ್ಟಿದ್ದ ಸಸಿ. ಈಗ ಹೆಮ್ಮರವಾಗಿ ಬೆಳೆದಿತ್ತು. ಹತ್ತಾರು ಮಕ್ಕಳು ಅದರ ಸುತ್ತ ಸುತ್ತುತ್ತ ಕೇಕೆ ಹಾಕುತ್ತ ಆಟವಾಡುತ್ತಿದ್ದರು.
ಕೃಪೆ : ಅನಂದ ತೀರ್ಥ ಪ್ಯಾಟಿ
ಪ್ರಜಾವಾಣಿ ತಾ: 07/13/2014